ಆಫ್ರಿಕ ಖಂಡ

	ಪೂರ್ವಾರ್ಧ ಗೋಳದಲ್ಲಿನ ಒಂದು ಖಂಡ. ವಿಸ್ತೀರ್ಣದಲ್ಲಿ ಏಷ್ಯ ಖಂಡಕ್ಕೆ ಎರಡನೆಯದು. ಭೂವಿಜ್ಞಾನದ ಪ್ರಕಾರ ಇದು ಬೃಹದಾಕಾರದ ಯುರೇಷಿಯ ಭೂಭಾಗದ ಒಂದು ಬಡಾವಣೆಯಾಗಿತ್ತು. ಇಂದು ಜಿಬ್ರಾಲ್ಟರ್ ಜಲಸಂಧಿ ಮತ್ತು ಸೂಯೆಜ್ ಕಾಲುವೆಗಳಿಂದಾಗಿ ಯೂರೋಪ್ ಖಂಡದಿಂದ ಪ್ರತ್ಯೇಕಿಸಲ್ಪಟ್ಟಿದೆ. ಅಂಕುಡೊಂಕಾದ ಪರ್ವತ ಶ್ರೇಣಿಗಳು, ಭವ್ಯ ಜಲಪಾತಗಳು, ದಟ್ಟವಾದ ಉಷ್ಣವಲಯದ ಕಾಡುಗಳಿಂದಾಗಿ ಇಲ್ಲಿನ ನೆಲ ರಮ್ಯವಾಗಿದೆ. ಕಾಡು ಮತ್ತು ಹುಲ್ಲುಗಾವಲುಗಳಲ್ಲಿ ಈ ಪ್ರದೇಶಕ್ಕೆ ವಿಶಿಷ್ಟವಾದ ಜಿರಾಫೆ, ಓಕಾಪಿ, ಆರ್ಡ್‍ವಾಕ್, ಹಿಪ್ಪೊ ಮೊದಲಾದ ಪ್ರಾಣಿಗಳು ವಾಸಿಸುತ್ತವೆ. ಕಾಂಗೊ ಪ್ರದೇಶದ ಪಿಗ್ಮಿಗಳು, ಕಲಹರಿ ಮರುಭೂಮಿಯ ಬುಷ್‍ಜನ ಶಿಲಾಯುಗದೊಂದಿಗಿನ ಸಂಬಂಧಕ್ಕೆ ಜೀವಂತ ಸಾಕ್ಷಿಗಳಾಗಿದ್ದಾರೆ. ಈಜಿಪ್ಟ್ ನವರು ನಿರ್ಮಿಸಿದ ಪುರಾತನ ಪಿರಮಿಡ್ಡುಗಳು ಮತ್ತು ದೇವಾಲಯಗಳು ಪ್ರಾಚೀನ ನಾಗರಿಕತೆಯ ಮೂಕಸಾಕ್ಷಿಗಳಾಗಿವೆ. ಹಿಂದಿನಿಂದಲೂ ಉತ್ತರ ಆಫ್ರಿಕಕ್ಕೂ ಏಷ್ಯ ಯೂರೋಪುಗಳಿಗೂ ಸಂಬಂಧವಿದ್ದಿತ್ತು. ಮಧ್ಯ ಮತ್ತು ದಕ್ಷಿಣ ಆಫ್ರಿಕಗಳು 19ನೆಯ ಶತಮಾನದವರೆಗೂ ಅಂಥ ಸಂಪರ್ಕಗಳಿಂದ ದೂರ ಉಳಿದುವು. ಅಂಟುಜಾಡ್ಯಗಳಿಗೆ ಯುಕ್ತ ಮದ್ದು ಬಳಕೆಗೆ ಬಂದಮೇಲೆ ಖಂಡಾನ್ವೇಷಣೆ ಬಿರುಸಿನಿಂದ ನಡೆದು ಇಲ್ಲಿನ ಪ್ರಾಕೃತಿಕ ಸಂಪನ್ಮೂಲಗಳ ಶೋಷಣೋದ್ದೇಶದಿಂದ ಬಂದ ಯೂರೋಪಿಯನ್ನರ ದಾಳಿಗೆ ಆಫ್ರಿಕ ತುತ್ತಾಯಿತು. ಫ್ರಾನ್ಸ್ ಬಹಳಕಾಲ ಖಂಡದ ಬಹುಭಾಗವನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿತ್ತು. ಆರ್ಥಿಕವಾಗಿ ಲಾಭದಾಯಕವಾದ ಭಾಗಗಳು ಬ್ರಿಟನ್ನಿನ ವಶದಲ್ಲಿದ್ದುವು. ಉಳಿದ ಭಾಗಗಳು ಬೆಲ್ಜಿಯಂ, ಪೋರ್ಚುಗಲ್ ಮತ್ತು ಸ್ಪೇನಿನ ವಶದಲ್ಲಿದ್ದುವು.

	ಆಫ್ರಿಕದ ಸಾಮಾನ್ಯ ಭೌಗೋಳಿಕ ಪರಿಚಯ ಈ ಲೇಖನದಲ್ಲಿದೆ. ಉಳಿದ ಎಲ್ಲ ವಿಷಯಗಳಿಗೂ ಈ ಲೇಖನಗಳನ್ನು 

(ನೋಡಿ- ಆಫ್ರಿಕದ-ಭಾಷೆಗಳು;)
(ನೋಡಿ- ಆಫ್ರಿಕದ-ಧರ್ಮ;)
(ನೋಡಿ- ಆಫ್ರಿಕದ-ನೀಗ್ರೊ-ಸಂಗೀತ;)
(ನೋಡಿ- ಆಫ್ರಿಕದ-ಕಲೆ;)
(ನೋಡಿ- ಆಫ್ರಿಕದ-ಜನಾಂಗಗಳು;)
(ನೋಡಿ- ಆಫ್ರಿಕದ-ಪ್ರಾಕ್ತನ-ಚರಿತ್ರೆ;)
(ನೋಡಿ- ಆಫ್ರಿಕದ-ಭೂ-ಇತಿಹಾಸ;)
(ನೋಡಿ- ಆಫ್ರಿಕದ-ರಾಜಕೀಯ-ಚರಿತ್ರೆ;)
(ನೋಡಿ- ಆಫ್ರಿಕದ-ಲಿಲ್ಲಿ)
(ನೋಡಿ- ಅಗಪಾಂತಸ್)

	
 ಸನ್ನಿವೇಶ ಮತ್ತು ವಿಸ್ತೀರ್ಣ 
ಸಮಭಾಜಕ ವೃತ್ತ ಈ ಖಂಡದ ಮಧ್ಯಭಾಗದಲ್ಲಿ ಹಾದುಹೋಗಿದ್ದು ಖಂಡವನ್ನು ಸುಮಾರು ಸಮವಾದ ಎರಡು ಭಾಗಗಳನ್ನಾಗಿ ಮಾಡಿದೆ. ಕರ್ಕಾಟಕಸಂಕ್ರಾಂತಿ ವೃತ್ತ ಮತ್ತು ಮಕರಸಂಕ್ರಾಂತಿ ವೃತ್ತಗಳು ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಕ್ರಮವಾಗಿ ಹಾದುಹೋಗಿರುವುದರಿಂದ ಈ ಖಂಡವನ್ನು ಉಷ್ಣವಲಯದ ಖಂಡವೆಂದೇ ಹೇಳಬಹುದು. ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರವೂ ಪೂರ್ವದಲ್ಲಿ ಹಿಂದೂ ಮಹಾಸಾಗರವೂ ಉತ್ತರದಲ್ಲಿ ಮೆಡಿಟರೇನಿಯನ್ ಸಮುದ್ರವೂ ಇದನ್ನು ಆವರಿಸಿದೆಯಾಗಿ ಇಡೀ ಖಂಡವೇ ಒಂದು ದ್ವೀಪದಂತಿದೆ.

	ಆಫ್ರಿಕ ಜಗತ್ತಿನ ಒಟ್ಟು ಭೂಭಾಗದ 1/5 ಭಾಗವನ್ನು ಆಕ್ರಮಿಸಿದೆ. ವಿಸ್ತೀರ್ಣ 11.6 ದಶಲಕ್ಷ ಚ.ಮೈ. ಅಂದರೆ ಯೂರೋಪಿನ ಮೂರರಷ್ಟು. ಉತ್ತರದಿಂದ ದಕ್ಷಿಣಕ್ಕೆ ಸುಮಾರು 5,000 ಮೈ. ಉದ್ದವಾಗಿಯೂ ಹೆಚ್ಚು ಅಗಲವಾಗಿರುವ ಸಹರ ಮರುಭೂಮಿಯ ಪ್ರದೇಶದಲ್ಲಿ ಪೂರ್ವ ಪಶ್ಚಿಮವಾಗಿ 4,500 ಮೈಲಿಗಳಷ್ಟು ಅಗಲವಾಗಿಯೂ ಇದೆ. 

	ಪಶ್ಚಿಮದಲ್ಲಿ ಗಿನಿ ಕೊಲ್ಲಿ ಇದೆ. ಪೂರ್ವದಲ್ಲಿ ಸೋಮಾಲಿ ಪರ್ಯಾಯ ದ್ವೀಪವಿದೆ (ಹಾರನ್ ಆಫ್ ಆಫ್ರಿಕ). ತೀರ ಪ್ರದೇಶ ಸಾಮಾನ್ಯವಾಗಿ ನೇರವಾಗಿದ್ದು ಹೆಚ್ಚಿನ ಖಾರಿ ಕೊಲ್ಲಿಗಳಿಲ್ಲದಿರುವುದರಿಂದ ಆಫ್ರಿಕದ ಬೆಳೆವಣಿಗೆ ಕುಂಠಿತವಾಗಿದೆ. ದಕ್ಷಿಣದ ತುದಿಯಿಂದ ಇನ್ನೂ ದಕ್ಷಿಣದಲ್ಲಿ ಅತಿ ದೊಡ್ಡದಾದ ಮಡಗಾಸ್ಕರ್ ದ್ವೀಪವಿದೆ. ಸೊಕೊಟ್ರ ದ್ವೀಪಗಳು ಏಡನ್ ಖಾರಿಯ ಮುಖದಲ್ಲಿವೆ. ಕೊಮೊರೊ ದ್ವೀಪಗಳು ಮೊಜಾಂಬಿಕ್ ಕಾಲುವೆಯ ಮುಖದಲ್ಲಿವೆ. ಜಾಂಬಿಹಾರ್ ಮತ್ತು ಪೆಂಬಗಳು ತಾಂಗನೀಕದ ತೀರದ ಆಚೆ ಇವೆ. ಅಟ್ಲಾಂಟಿಕ್ ಸಾಗರದಲ್ಲಿ ಹರಡಿರುವ ದ್ವೀಪಗಳೆಂದರೆ ಸೇಂಟ್ ಹೆಲೆನ್ ಅಸೆನ್‍ಷನ್, ಮಡೀರ್, ಕೇಪ್ ವರ್ಡೆ ದ್ವೀಪಗಳು.

ಮೇಲ್ಮೈಲಕ್ಷಣ
ಆಫ್ರಿಕ ಖಂಡ ವಿಸ್ತಾರವಾದ ಮತ್ತು ಅವಿಚ್ಛಿನ್ನವಾದ ಪ್ರಸ್ಥಭೂಮಿ. ಇದ್ದಕ್ಕಿದ್ದಂತೆ ಕಡಿದಾದ ತೀರಪ್ರದೇಶದಿಂದ ಭೂಮಿ ಸ್ತರಸ್ತರವಾಗಿ ಎತ್ತರವಾಗುತ್ತ ಬಂದು ಡ್ರಾಕೆನ್ಸ್‍ಬರ್ಗ್ ಪರ್ವತಗಳಲ್ಲಿ ಲೀನವಾಗುತ್ತದೆ. ದಕ್ಷಿಣದಲ್ಲಿ ಇಳಿಜಾರು ಕ್ರಮವಾಗಿದೆ. ಪ್ರಸ್ಥಭೂಮಿಯ ಅಂಚು ಕಡಿದಾಗಿದ್ದು ಹರಿಯುವ ನದಿಗಳೆಲ್ಲ ಜಲಪಾತಗಳಾಗಿ ಧುಮುಕುವುದರಿಂದ ಸಾರಿಗೆ ಸೌಲಭ್ಯಗಳು ಬೆಳೆಯಲು ಅವಕಾಶ ಕಡಿಮೆ. ಪಶ್ಚಿಮದಲ್ಲಿ ಈಜಿಪ್ಟ್, ಇಟಲಿಯ ಸೋಮಾಲಿ ಲ್ಯಾಂಡ್, ನೈಜೀರಿಯ, ಫ್ರೆಂಚ್ ಪಶ್ಚಿಮ ಆಫ್ರಿಕ ಭಾಗಗಳಲ್ಲಿ ದೊಡ್ಡ ಮೈದಾನಗಳಿವೆ. ಗಿನಿ ಖಾರಿಯ ಭಾಗದಲ್ಲಿ ವ್ಯಾಪಾರಕೇಂದ್ರಗಳಾದ ಐವರಿಕೋಸ್ಟ್, ಸ್ಲೇವವಕೋಸ್ಟ್, ಗೋಲ್ಡ್‍ಕೋಸ್ಟ್‍ಗಳಿವೆ. ಖಂಡದ ಬಹುಭಾಗಗಳು ಪುರಾತನ ಶಿಲೆಗಳಿಂದ ನಿರ್ಮಿತವಾಗಿವೆ. ಆದುದರಿಂದಲೇ ಇಲ್ಲಿ ಅನೇಕ ರೀತಿಯ ಬೆಲೆ ಬಾಳುವ ಖನಿಜಗಳು ದೊರೆಯುತ್ತವೆ.

	ದಕ್ಷಿಣದಲ್ಲಿರುವ ಕೇಸ್ ಪರ್ವತಶ್ರೇಣಿಗಳೂ ಉತ್ತರದಲ್ಲಿರುವ ಅಟ್ಲಾಸ್ ಪರ್ವತಗಳೂ ಗುಣಲಕ್ಷಣಗಳಲ್ಲಿ ಯೂರೋಪಿನ ದಕ್ಷಿಣದಲ್ಲಿರುವ ಅಲ್‍ಪೈನ್ ಮತ್ತು ಹಿಮಾಲಯ ಪರ್ವತಗಳ ಗುಂಪಿಗೆ ಸೇರಿದ ಪಕ್ಷೀಕೃತ ಪರ್ವತಗಳು. ಈ ಪರ್ವತಗಳಲ್ಲಿ ಬಹು ಎತ್ತರದ ಶಿಖರಗಳೆಂದರೆ, ಮೌಂಟ್ ಕಿಲಿಮಾಜೀರೋ (19,320), ಮೌಂಟ್ ಕೆನ್ಯ (17,040), ಎಲ್ಗಿನ್ 14,136).

	ಸಾಮಾನ್ಯವಾಗಿ ಭೂಮಿಯ ಎತ್ತರ ದಕ್ಷಿಣದಲ್ಲಿ ಹೆಚ್ಚಾಗಿದೆ (1000-4000). ಉತ್ತರದ ಕಡೆ ಹೋದಂತೆ ಭೂಮಿಯ ಎತ್ತರ ಕಡಿಮೆಯಾಗುತ್ತ ಹೋಗುವುದು (5000-1000). ಅತ್ಯಂತ ಉನ್ನತವಾದ ಪ್ರದೇಶವೆಂದರೆ ಇಥಿಯೋಪಿಯದ ಪ್ರಸ್ಥಭೂಮಿ. ಅಲ್ಲಿಯ ಭೂಮಿಯ ಮಟ್ಟ 15,000 ಗಿಂತಲೂ ಹೆಚ್ಚು. ದಕ್ಷಿಣದ ಕಡೆ ಪೂರ್ವ ಆಫ್ರಿಕದ ಪ್ರಸ್ಥಭೂಮಿ ಸುಮಾರು 8,000 ಎತ್ತರ.

	ಆಫ್ರಿಕದ ತಗ್ಗುಪ್ರದೇಶಗಳು ಅಪಾರ ವಿಸ್ತಾರವನ್ನಾಕ್ರಮಿಸಿವೆ. ಅವುಗಳಲ್ಲೊಂದಾದ ಖಂಡದ ಪೂರ್ವ ಭಾಗದಲ್ಲಿರುವ ಸೀಳು ಕಣಿವೆಗಳು ಗಮನಾರ್ಹವಾದ ಮತ್ತು ವೈಶಿಷ್ಟ್ಯ ಪೂರ್ಣವಾದ ಪ್ರಾಕೃತಿಕ ಲಕ್ಷಣವನ್ನು ಹೊಂದಿದೆ. ಇದು ಸುಮಾರು 48 ಕಿ.ಮೀ. ಅಗಲವಾಗಿಯೂ 4800 ಕಿ.ಮೀ. ಉದ್ದವಾಗಿಯೂ ಇದೆ. ಕಣಿವೆಯ ತಗ್ಗುಪ್ರದೇಶಗಳಲ್ಲಿ ಖಂಡದ ಮುಖ್ಯ ಸರೋವರಗಳಿವೆ. ಆಲ್ಬರ್ಟ್, ತಾಂಗನೀಕ, ನಯಾಸ ಮತ್ತು ರಡಾಲ್ಫ್ -ಇವು ಇಲ್ಲಿನ ಮುಖ್ಯ ಸರೋವರಗಳು. ಎರಡನೆಯ ನಿಮ್ನ ಭೂಮಿಯೇ ಸಹರ ಮರುಭೂಮಿ. ಇದು ದಕ್ಷಿಣ ಆಲ್ಜೀರಿಯ, ಲಿಬಿಯ, ಪಶ್ಚಿಮ ಆಫ್ರಿಕ ಉಷ್ಣವಲಯದ ಭಾಗಗಳನ್ನೊಳಗೊಂಡು ಈಜಿಪ್ಟ್ ಮತ್ತು ಸೂಡಾನ್‍ಗಳನ್ನು ಮುಟ್ಟಿದೆ. ಸಹರ ಮರುಭೂಮಿಯ ದಕ್ಷಿಣದಲ್ಲಿ ಚಾಡ್ ಎಂಬ ಮತ್ತೊಂದು ಸರೋವರವಿದೆ. ವಿಕ್ಟೋರಿಯ ಸಹ ಸೀಳು ಕಣಿವೆಯಲ್ಲಿರುವ ಅತ್ಯಂತ ದೊಡ್ಡ ಸರೋವರ. ಇದು ಪ್ರಪಂಚದ ದೊಡ್ಡ ಸರೋವರಗಳಲ್ಲಿ ಮೂರನೆಯದು. ವಿಸ್ತೀರ್ಣ 26,820 ಚ.ಮೈ. ನಿಮ್ನಭೂಮಿಯ ಮೂರನೆಯ ಭಾಗವೆಂದರೆ ಕ್ವಟ್ಟಾರ ಪ್ರದೇಶ. ಸಮುದ್ರಮಟ್ಟಕ್ಕೆ 440 ತಗ್ಗಿನಲ್ಲಿದೆ. ಕಲಹರಿ ಮತ್ತು ದಕ್ಷಿಣದ ಇತರ ಮರುಭೂಮಿಗಳೂ ಸೇರಿದರೆ ದೇಶದ 25% ಒಣ ಹವೆಯಾಗಿದೆ.

ಆಫ್ರಿಕದ ನದಿಗಳು
ಅಲ್ಲಿಯ ವಾಯುಗುಣ ಮತ್ತು ಮೇಲ್ಮೈಲಕ್ಷಣವನ್ನು ಅವಲಂಬಿಸಿವೆ. ಮರುಭೂಮಿ ಪ್ರದೇಶದಲ್ಲಿ ನದಿಗಳೇ ಇಲ್ಲದಿರುವುದು, ಹೆಚ್ಚು ಮಳೆ ಬೀಳುವ ಸಮಭಾಜಕ ವೃತ್ತ ಪ್ರದೇಶದಲ್ಲಿ ಅನೇಕ ನದಿಗಳು ಹರಿಯುವುದು ಈ ಖಂಡದ ಒಂದು ವೈಶಿಷ್ಟ್ಯ. ನದಿಗಳೆಲ್ಲ ಪ್ರಸ್ಥಭೂಮಿಯ ನಡುವಣ ಜೌಗು ಪ್ರದೇಶ ಮತ್ತು ಸರೋವರ ಪ್ರದೇಶಗಳಲ್ಲಿ ಹುಟ್ಟಿ ಆಟ್ಲಾಂಟಿಕ್ ಮತ್ತು ಮೆಡಿಟರೇನಿಯನ್ ಸಮುದ್ರಗಳನ್ನು ಸೇರುತ್ತವೆ. eóÁಂಬೆಜಿû ಮಾತ್ರ ಹಿಂದೂ ಮಹಾಸಾಗರಕ್ಕೆ ಸೇರುತ್ತದೆ. 
ಆಫ್ರಿಕದ ಅತಿಮುಖ್ಯ ನದಿಯಾದ ನೈಲ್ ವಿಕ್ಟೋರಿಯ ಸರೋವರದ ಬಳಿ ಹುಟ್ಟಿ ಉತ್ತರಾಭಿಮುಖವಾಗಿ ಹರಿದು, ಉಪನದಿಯಾದ ನೀಲಿನೈಲ್ ಜೊತೆಗೂಡಿ ಮೆಡಿಟರೀನಿಯನ್ ಸಮುದ್ರಕ್ಕೆ ಬೀಳುವುದು. ಜಗತ್ತಿನ ಅತಿ ಉದ್ದವಾದ ನದಿಗಳ ಗುಂಪಿನಲ್ಲಿ ನೈಲ್ ಪ್ರಥಮ ಸ್ಥಾನವನ್ನೂ (6460 ಕಿ.ಮೀ.) ಕಾಂಗೊ ಆರನೆಯ ಸ್ಥಾನವನ್ನೂ (4800 ಕಿ.ಮೀ.) ನೈಜರ್ ಹತ್ತನೆಯ ಸ್ಥಾನವನ್ನೂ (4160 ಕಿ.ಮೀ.) ಪಡೆದಿವೆ. 

	ನೈಲ್ ಬ್ರಿಟಿಷ್ ಉಗಾಂಡ, ಸೂಡಾನ್ ಗಣರಾಜ್ಯ ಮತ್ತು ಈಜಿಪ್ಟ್‍ಗಳ ಮೂಲಕ ಹರಿಯುತ್ತದೆ. ನೈಜರ್ ತನ್ನದೇ ಆದ ಮೆಕ್ಕಲು ಮಣ್ಣಿನ ಮೈದಾನವನ್ನೂ ಮುಖಭೂಮಿಯನ್ನೂ ಸೃಷ್ಟಿಸಿದೆ. ಕಾಂಗೊ ನದಿಯ ಅಳಿವೆಯನ್ನು ನೋಡಿದರೆ ದೇಶದ ಅಂತರಾಳದಲ್ಲಿ ಒಂದು ಒಳ ಸಮುದ್ರವಿತ್ತೆಂಬ ಊಹೆಗೆ ಅವಕಾಶವಾಗುತ್ತದೆ. eóÁಂಬೆಜಿû ವಿಕ್ಟೋರಿಯ ಜಲಪಾತಕ್ಕೂ ಆರೆಂಜ್ ನದಿ ತುಗೇಲ್ ಜಲಪಾತಕ್ಕೂ ಪ್ರಸಿದ್ಧವಾಗಿವೆ. ಜಲಪಾತಗಳಿಂದ ವಿದ್ಯುಚ್ಛಕ್ತಿ ನಿರ್ಮಾಣದ ಯೋಜನೆಗಳಿಗೆ ಒಳ್ಳೆಯ ಭವಿಷ್ಯವಿದೆ. 

ವಾಯುಗುಣ
350 ದಕ್ಷಿಣ ಅಕ್ಷಾಂಶದಿಂದ 370 ಉತ್ತರ ಅಕ್ಷಾಂಶದವರೆಗೆ ಆಫ್ರಿಕ ಆವರಿಸಿರುವುದರಿಂದ ಮುಖ್ಯವಾಗಿ ಉಷ್ಣವಲಯದ ಹವಾಗುಣವನ್ನು ಹೊಂದಿದೆ. ವಿಶಾಲವಾದ ಈ ಖಂಡದ ವಾಯುಗುಣದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೆಚ್ಚಿನ ವ್ಯತ್ಯಾಸವಿದೆ. ಉತ್ತರ ಮತ್ತು ದಕ್ಷಿಣದ ತುದಿಗಳಲ್ಲಿ ಮೆಡಿಟರೀನಿಯನ್ ಹವಾಗುಣವಿದೆ. ಮಧ್ಯ ಆಫ್ರಿಕದಲ್ಲಿ ಸಾಮಾನ್ಯವಾಗಿ ತೇವದಿಂದ ಕೂಡಿದ ಉಷ್ಣ ವಾತಾವರಣವಿದೆ. ಸವನ್ನ ಹುಲ್ಲುಗಾವಲುಗಳಲ್ಲಿ ಅಷ್ಟು ಉಷ್ಣತೆ ಇಲ್ಲ. ಸ್ಥಳ ಎತ್ತರವಾಗಿರುವುದರಿಂದ ಪೂರ್ವ ಭಾಗದಲ್ಲಿ ವಾಯುಗುಣ ಹಿತಕರವಾಗಿದೆ. 

	ಸಹರ ಮರುಭೂಮಿಯಲ್ಲಿ ಸರಾಸರಿ ವಾರ್ಷಿಕ ಮಳೆ ಕೇವಲ 5ಗಳಿಗಿಂತಲೂ ಕಡಿಮೆಯಾಗಿ ಕೆಲವು ವರ್ಷಗಳಲ್ಲಿ ಅನಾವೃಷ್ಟಿಯುಂಟಾಗುವುದು. ಬೇಸಿಗೆಯಲ್ಲಿ ಉಷ್ಣ ಸುಮಾರು 1200 ಫ್ಯಾ.ಗೂ ಹೆಚ್ಚಾಗಿರುತ್ತದೆ. ಕಾಂಗೊ ನದಿಯ ಬಯಲುಗಳಲ್ಲಿ, ಪಶ್ಚಿಮ ಆಫ್ರಿಕದ ಕೆಲವು ಭಾಗಗಳಲ್ಲಿ ಸರಾಸರಿ 80ಗಳಷ್ಟು ಮಳೆ ಬೀಳುವುದು. ಕ್ಯಾವರೊನ್ ಪ್ರದೇಶದಲ್ಲಿ 400 ಮಳೆ ಬೀಳುತ್ತದೆ. ಉನ್ನತವಾದ ಪ್ರಸ್ಥಭೂಮಿಗಳಲ್ಲಿ ಸಮಶೀತೋಷ್ಣ ಮಾದರಿಯ ವಾಯುಗುಣವನ್ನು ಕಾಣಬಹುದು. ಹಾಗೆಯೇ ಅಗ್ನಿಪರ್ವತದ ಶಿಲಾರಸದಿಂದ ಉಂಟಾದ ಕಿಲಿಮಾಂಜೀರೋ, ಕೆನ್ಯ ಮತ್ತು ಎಲ್ಗಿನ್ ಶಿಖರಗಳನ್ನು ವರ್ಷದ ಎಲ್ಲ ಋತುಗಳಲ್ಲೂ ಮಂಜಿನಿಂದ ಮುಚ್ಚಿರುತ್ತವೆ. 

	ಆಫ್ರಿಕದ ವಾಯುಗಣದಲ್ಲಿ ಒಂದು ರೀತಿಯ ವೈಶಿಷ್ಟ್ಯವಿದೆ. ಉತ್ತರಾರ್ಧಗೋಳದಲ್ಲಿರುವಂಥ ವಾಯುಗುಣ ವಲಯಗಳೇ ದಕ್ಷಿಣಾರ್ಧಗೋಳದಲ್ಲಿದೆ. ಸಮಭಾಜಕವೃತ್ತ ಖಂಡದ ನಡುವೆ ಹಾದುಹೋಗುವುದರಿಂದ ಉತ್ತರಾರ್ಧಗೋಳದಲ್ಲಿ ಬೇಸಿಗೆ ಕಾಲವಾಗಿದ್ದರೆ ದಕ್ಷಿಣಾರ್ಧಗೋಳದಲ್ಲಿ ಚಳಿಗಾಲ. 

	ಸಮಭಾಜಕವೃತ್ತದ ಎರಡು ಕಡೆಗಳಲ್ಲೂ ಉತ್ತರ ಮತ್ತು ದಕ್ಷಿಣದ 50 ಅಕ್ಷಾಂಶಗಳ ಮಧ್ಯೆ ಅಧಿಕ ಶಾಖ, ಅಧಿಕ ಮಳೆಯಿಂದ ಕೂಡಿದ ಸಮಭಾಜವೃತ್ತ ಮಾದರಿಯ ವಾಯುಗುಣವಿದೆ. 50-150 ಅಕ್ಷಾಂಶಗಳ ಮಧ್ಯೆ ಬೆಚ್ಚನೆಯ ವಾಯುಗುಣವಿದ್ದರೂ ಬೇಸಿಗೆಯಲ್ಲಿ ಮಳೆ ಬೀಳುತ್ತದೆ. ಇದು ಉಷ್ಣವಲಯದ ವಾಯುಗುಣ. ಈ ವಲಯದಿಂದ ಉತ್ತರ ಮತ್ತು ದಕ್ಷಿಣಕ್ಕೆ ತೇವಾಂಶ ಕಡಿಮೆಯಾಗುತ್ತ ಶುಷ್ಕ ವಾತಾವರಣದಿಂದ ಕೂಡಿದ ಮರುಭೂಮಿ ಪ್ರದೇಶ ಪ್ರಾರಂಭವಾಗುತ್ತದೆ. 

	ಪಶ್ಚಿಮ ತೀರದಲ್ಲಿ ಸಮಭಾಜಕವೃತ್ತದ ಕಡೆ ಹರಿಯುವ ಬೆಂಗುಎಲ ಶೀತೋದಕ ಪ್ರವಾಹವೂ ಪೂರ್ವಭಾಗದಲ್ಲಿ ಹರಿಯುವ ಮೊಜಾಂಬಿಕ್ ಉಷ್ಣೋದಕ ಪ್ರವಾಹವೂ ತೀರಪ್ರದೇಶಗಳ ವಾಯುಗುಣದ ಮೇಲೆ ಹೆಚ್ಚು ಪ್ರಭಾವವನ್ನು ಬೀರುತ್ತವೆ. 

	ವಾಯುಗುಣದ ರೀತ್ಯ ಇಲ್ಲಿ ಅತಿ ಮುಖ್ಯವಾದ ನಾಲ್ಕು ವಲಯಗಳನ್ನು ಕಾಣಬಹುದು. ಕಾಂಗೊ ನದಿಯ ಬಯಲು, ಮಧ್ಯಾಫ್ರಿಕದ ಗಣರಾಜ್ಯ ಗಿನಿತೀರ ಪ್ರದೇಶಗಳು, ದಕ್ಷಿಣ ನೈಜೀರಿಯ, ಐವರಿ ಕೋಸ್ಟ್ ಮತ್ತು ಘಾನದ ಸ್ವಲ್ಪ ಭಾಗಗಳಲ್ಲಿ ಸಮಭಾಜಕವೃತ್ತ ಮಾದರಿಯ ವಾಯುಗುಣ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ವರ್ಷವೆಲ್ಲ ಉಷ್ಣತೆ ಹೆಚ್ಚು, ಮಳೆ ಅಧಿಕ. ಮಧ್ಯಾಹ್ನಾತ್ಪರ ಶಾಖದ ಪ್ರಚಲನದಿಂದಾಗಿ ಮಳೆ ಬೀಳುತ್ತದೆ. ಉಷ್ಣವಲಯದ ವಾಯುಗುಣ ಸಮಭಾಜಕ ವೃತ್ತ ವಲಯದ ಇಕ್ಕೆಲಗಳಲ್ಲೂ ಕಂಡುಬರುವುದು. ಸವನ್ನ ಪ್ರದೇಶಗಳಿಂದ, ಪಶ್ಚಿಮದಲ್ಲಿ ಜಾಡ್ ಸರೋವರದವರೆಗೂ ದಕ್ಷಿಣದಲ್ಲಿ ತ್ಯಾಂಗನೀಕ, ಜಾಂಬಿಯ ಮತ್ತು ಅಂಗೋಲಗಳಲ್ಲೂ ಈ ವಾಯುಗುಣವಿದೆ. ಸಮಭಾಜಕವೃತ್ತದ ವಾಯುಗುಣದ ಪ್ರದೇಶಕ್ಕಿಂತ ಇಲ್ಲಿ ಮಳೆ ಕಡಿಮೆ. ಬೆಚ್ಚನೆಯ ಬೇಸಿಗೆಯೂ ಶೀತವಾದ ಚಳಿಗಾಲವೂ ಇಲ್ಲಿಯ ವಾಯುಗುಣದ ವೈಶಿಷ್ಟ್ಯ. ಇದನ್ನು ಸೂಡಾನ್ ಮಾದರಿಯ ವಾಯುಗುಣವೆಂದು ಕರೆಯುತ್ತಾರೆ. ಮರುಭೂಮಿಯ ವಾಯುಗುಣವೆಂದರೆ ಅಧಿಕಶಾಖದಿಂದ ಕೂಡಿ ಮಳೆಯ ಸುಳಿವೇ ಇಲ್ಲದ್ದು. ಇಂಥದು ಉತ್ತರದ ಸಹರ ಮರಭೂಮಿ ಪ್ರದೇಶದಲ್ಲೂ ದಕ್ಷಿಣದಲ್ಲಿ ಕಲಹರಿ ಮರುಭೂಮಿ ವಲಯದಲ್ಲೂ ಕಂಡುಬರುತ್ತದೆ. ಮೆಡಿಟರೇನಿಯನ್ ವಾಯುಗುಣ ಉತ್ತರದಲ್ಲಿ ಮೊರಾಕೊ, ಆಲ್ಜೀರಿಯ, ಟ್ಯುನೀಸಿಯ, ಲಿಬಿಯ ಮತ್ತು ಈಜಿಪ್ಟ್ ದೇಶಗಳ ಉತ್ತರ ತೀರಗಳಲ್ಲೂ ದಕ್ಷಿಣದ ತುದಿಯಲ್ಲೂ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಮಳೆ ಬೀಳುತ್ತದೆ. ಮತ್ತು ಬೇಸಿಗೆಯಲ್ಲಿ ಮಳೆಯಿಲ್ಲ, ಸೆಕೆ ಹೆಚ್ಚು. ಇಲ್ಲಿಯ ವಾಯುಗುಣ ಹಿತಕರವೂ ಉತ್ತೇಜನಕಾರಿಯೂ ಆಗಿರುವುದು. 

ಸ್ವಾಭಾವಿಕ ಸಸ್ಯವರ್ಗ
ಹೆಚ್ಚಾಗಿ ಅಲ್ಲಿಯ ವಾಯುಗುಣವನ್ನು ಅವಲಂಬಿಸಿರುತ್ತದೆ. ಒಂದಾನೊಂದು ಕಾಲದಲ್ಲಿ ದಟ್ಟಡವಿಗಳು ಮತ್ತು ಮನುಷ್ಯನ ಎತ್ತರದ ಹುಲ್ಲುಗಾವಲುಗಳಿಂದ ಇಡಿ ಪ್ರದೇಶವೇ ತುಂಬಿಹೋಗಿತ್ತು. ಈಗ ಅನೇಕ ಕಡೆಗಳಲ್ಲಿ ಕಾಡುಗಳನ್ನೂ, ಹುಲ್ಲುಗಾವಲುಗಳನ್ನೂ ಸವರಿ ಅಥವಾ ಸುಟ್ಟು ವ್ಯವಸಾಯಕ್ಕೆ ಅಳವಡಿಸಿಕೊಂಡಿದ್ದಾರೆ. ವಾಯುಗುಣಕ್ಕೆ ಅನುಸಾರವಾಗಿ ಇಲ್ಲಿ ಐದು ಮುಖ್ಯವಾದ ಸ್ವಾಭಾವಿಕ ಸಸ್ಯವಲಯಗಳಿವೆ. 

	ಸಮಭಾಜಕ ವೃತ್ತ ಪ್ರದೇಶದ ಸಸ್ಯವರ್ಗ ಕಾಂಗೊ ಮತ್ತು ಗಿನಿ ಭಾಗಗಳಲ್ಲಿ ಹೇರಳವಾಗಿದೆ. ಮಡಗಾಸ್ಕರ್ ದ್ವೀಪದಲ್ಲೂ ಇದೇ ಸಸ್ಯವರ್ಗವುಂಟು. ನಿತ್ಯಹರಿದ್ವರ್ಣ ಜಾತಿಯ ಅನೇಕ ಕಾಡುಗಳು ಇಲ್ಲಿ ಹೆಚ್ಚಾಗಿವೆ. ಎಲ್ಲೆಲ್ಲೂ ದಟ್ಟವಾಗಿ ಬೆಳೆದು ನಿಂತಿರುವ ದೈತ್ಯಾಕಾರದ ಮರಗಳಿವೆ. ಮಹಾಗನಿ, ಐರನ್‍ವುಡ್, ಕೋಕೊ ಮತ್ತು ರಬ್ಬರ್ ಮುಂತಾದ ನಾನಾ ಜಾತಿಯ ಉಪಯುಕ್ತ ಸಸ್ಯಗಳಿವೆ. ತೆಂಗು ಮತ್ತು ಕಾಡುಬಾಳೆ ಅಧಿಕ. 

ಸವನ್ನ ಹುಲ್ಲುಗಾವಲುಗಳು
ಸಮಭಾಜಕವೃತ್ತದ ಕಾಡುಗಳ ಎರಡು ಕಡೆಗಳಲ್ಲೂ ವಿಸ್ತಾರವಾಗಿ ಹಬ್ಬಿವೆ. ಅಂಚಿನಲ್ಲಿ ಅಲ್ಲಲ್ಲಿ ಕುರುಚಲು ಗಿಡಮರಗಳಿವೆ. ಇವು ಉಷ್ಣವಲಯದ ಹುಲ್ಲುಗಾವಲುಗಳು. ಪಶ್ಚಿಮದಲ್ಲಿ ಅಟ್ಲಾಂಟಿಕ್ ತೀರಪ್ರದೇಶದಿಂದ ಪೂರ್ವದಲ್ಲಿ ಉಗಾಂಡದವರೆಗೂ ದಕ್ಷಿಣದಲ್ಲಿ ಪೂರ್ವ ಆಫ್ರಿಕದ ಬೆಟ್ಟದ ಸೀಮೆಯಿಂದ ಅಟ್ಲಾಂಟಿಕ್ ಸಾಗರದವರೆಗೂ ವಿಶಾಲವಾದ ಈ ಹುಲ್ಲುಗಾವಲುಗಳು ಹಬ್ಬಿವೆ. ಇತ್ತೀಚೆಗೆ ಉಗಾಂಡ, ಸೂಡಾನ್, ರೊಡೀಷಿಯ, ಜಾಂಬಿಯ ಮತ್ತು ಅಂಗೋಲಗಳಲ್ಲಿ ಹುಲ್ಲುಗಾವಲುಗಳನ್ನು ವ್ಯವಸಾಯಕ್ಕೆ ಅಳವಡಿಸಿಕೊಂಡಿದ್ದಾರೆ. 

	ಸಮಶೀತೋಷ್ಣವಲಯದ ಹುಲ್ಲುಗಾವಲುಗಳನ್ನು ಹೈವೆಲ್ಡ್ ಎಂದು ಕರೆಯುತ್ತಾರೆ. ದಕ್ಷಿಣ ಆಫ್ರಿಕದ ಪ್ರಸ್ಥಭೂಮಿಯ ಪೂರ್ವಭಾಗ, ಕೇಪ್ ಪ್ರಾಂತ್ಯ, ಆರೆಂಜ್ ಫ್ರೀಸ್ಟೇಟ್ ಮತ್ತು ಟ್ರಾನ್ಸ್‍ವಾಲ್‍ಗಳಲ್ಲಿ ವೆಲ್ಡ್ ಮತ್ತು ಹೈವೆಲ್ಡ್ ಹುಲ್ಲುಗಾವಲುಗಳಿವೆ. ಸರಾಸರಿ 20 - 40 ಮಳೆ ಬೀಳುವುದರಿಂದ ಹುಲ್ಲು ತುಂಬ ಹುಲುಸಾಗಿ ಬೆಳೆಯುವುದು. ಪೂರ್ವದಿಂದ ಪಶ್ಚಿಮಕ್ಕೆ ಹೋದಂತೆಲ್ಲ ಮಳೆಯ ಪ್ರಮಾಣ ಕಡಿಮೆಯಾಗುತ್ತ ಮರುಭೂಮಿಯ ವಾತಾವರಣ ಕಂಡುಬರುತ್ತದೆ. 

	ಉತ್ತರದಲ್ಲಿರುವ ಸಹರ, ಜಗತ್ತಿನಲ್ಲಿ ಅತ್ಯಂತ ದೊಡ್ಡದಾದ ಮರುಭೂಮಿ ಓಯಸಿಸ್ ಇರುವ ಪ್ರದೇಶಗಳಲ್ಲಿ ಖರ್ಜೂರದ ಗಿಡಗಳು ಬೆಳೆಯುತ್ತವೆ. ಮರುಭೂಮಿಯ ಅಂಚಿನಲ್ಲಿ ಕುರುಚಲು ಗಿಡಗಳೂ ಕಾಣಸಿಗುತ್ತವೆ. 

	ದಕ್ಷಿಣದಲ್ಲಿರುವ ಕಲಹರಿ ಸಹರಾದಷ್ಟು ಸಸ್ಯರಹಿತವಾಗಿಲ್ಲ. ಅಲ್ಪಸ್ವಲ್ಪ ಮಳೆ ಬೀಳುವುದರಿಂದ ಶುಷ್ಕ ವಾತಾವರಣವನ್ನು ತಡೆದುಕೊಳ್ಳುವಂಥ ಕೆಲವು ಮರಗಿಡಗಳು ಕಾಣಿಸುತ್ತವೆ. 

	ಮೆಡಿಟರೇನಿಯನ್ ಸಸ್ಯವರ್ಗ ಉತ್ತರ ಮತ್ತು ದಕ್ಷಿಣ ಆಫ್ರಿಕದಲ್ಲಿ ವ್ಯಾಪಿಸಿದೆ. ಸಾಮಾನ್ಯವಾಗಿ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಬೆಚ್ಚನೆಯ ಹರಿದ್ವರ್ಣದ ಕಾಡುಗಳಲ್ಲಿ ಓಕ್, ಕಾರ್ಕ್, ಸಿಡಾರ್ ಮುಂತಾದ ಉಪಯುಕ್ತ ಮರಗಳಿವೆ. ಮಳೆ ಕಡಿಮೆ ಬೀಳುವಲ್ಲಿ ಮಾಕ್ವೀಸ್ ಜಾತಿಯ ಮರಗಳಿವೆ. ಈಚೆಗೆ ಇಲ್ಲಿ ವಿವಿಧ ಜಾತಿಯ ಹಣ್ಣಿನ ಮರಗಳನ್ನು ಸಮೃದ್ಧವಾಗಿ ಬೆಳೆಸಿದ್ದಾರೆ. 

ವನ್ಯಮೃಗ ಸಂಪತ್ತು
ಆಫ್ರಿಕ ತನ್ನ ಮೃಗ ವಿಶೇಷಗಳಿಗೆ ಪ್ರಸಿದ್ಧವಾಗಿದೆ. ನಡುವಣ ದೊಡ್ಡ ಕಾಡುಗಳಲ್ಲಿ ಗೊರಿಲ್ಲ, ಚಿಂಪಾಂಜಿ, ಲೌವ್ ಬರ್ಡ್, ಕೆಂಪು ಎದೆಯ ಗಿಣಿ, ಹೆಬ್ಬಾವು, ನಾಗರ, ಮೊಸಳೆ ಮೊದಲಾದ ಮೃಗಗಳಿವೆ. ಸವನ್ನ ಮತ್ತು ವೆಲ್ಡ್ ಪ್ರದೇಶಗಳಲ್ಲಿ ಸಿಂಹ, ಜೀಬ್ರ, ಚಿರತೆ, ಹಯನ, ರ್ಹಿನೊಸೆರಸ್, ಕಾಡೆಮ್ಮೆ, ಅರ್ಡ್‍ವುಲ್ಫ್, ಮುಳ್ಳುಹಂದಿ ಅನೇಕ ಬಗೆಯ ಜಿಂಕೆಗಳು, ಆನೆಗಳು ಮುಂತಾದ ಪ್ರಾಣಿಗಳು ಸಾವಿರ ಸಂಖ್ಯೆಯಲ್ಲಿವೆ. ಈಚೆಗೆ ಮಾನವನ ಪ್ರವೇಶದಿಂದಾಗಿ, ವಿವೇಚನೆಯಿಲ್ಲದ ಬೇಟೆಯಿಂದಾಗಿ ಅವುಗಳ ಸಂಖ್ಯೆ ಬಹು ಕಡಿಮೆಯಾಗಿದೆ. ಮೆಡಿಟರೇನಿಯನ್ ಪ್ರದೇಶಗಳಲ್ಲಿ ಒಂಟೆ, ಕಂಕನರಿ, ಕಾಡುಹಂದಿ, ಲಿಬಿಯದ ಕಾಡುಕತ್ತೆಗಳು, ಕಪಿಗಳು ಹೇರಳವಾಗಿವೆ. ಆಫ್ರಿಕದ ಮೃಗಗಳಲ್ಲಿ ಸೆಕ್ರೆಟರಿ ಹಕ್ಕಿ, ಐಬಿಸ್, ಹಾರನಬಿಲ್, ಮರಾಬು, ಗಿನಿ ಹಕ್ಕಿಗಳು ಪ್ರಸಿದ್ಧವಿವೆ. ಇಡೀ ಖಂಡದಲ್ಲಿ ಹುಳುಹುಪ್ಪಟೆಗಳು ಲಕ್ಷಗಟ್ಟಲೆ ಇವೆ. ಅನೇಕ ಬಗೆಯ ಚಿಟ್ಟೆಗಳಿವೆ. ಸೈನಿಕ ಇರುವೆಗಳಿಗೆ ಮಿಡಿತೆಗಳಿಗೆ ಆಫ್ರಿಕ ತವರೂರು. ಮಲೇರಿಯ ಹರಡುವ ಸೊಳ್ಳೆ ಮತ್ತು ಟ್ಸೆಟ್ಸೆ ನೊಣಗಳು ಇಲ್ಲಿಯವೆ. ಉಷ್ಟ್ರಪಕ್ಷಿ ಇಲ್ಲಿನ ಮರುಭೂಮಿಯ ಮೂಲವಾಸಿ. ಈಚೆಗೆ ವನ್ಯಮೃಗ ಸಂರಕ್ಷಣೆಗಾಗಿ ಅಂತರಾಷ್ಟ್ರೀಯ ಚಳವಳಿ ಪ್ರಾರಂಭವಾದ ವೇಳೆ ಆಫ್ರಿಕದಲ್ಲಿ ಬಹು ದೊಡ್ಡ ವನ್ಯಮೃಗ ಸಂರಕ್ಷಣಾಲಯಗಳು ಏರ್ಪಟ್ಟಿವೆ. 

ಖನಿಜ ಸಂಪತ್ತು
ಅತಿ ಪ್ರಾಚೀನ ಕಾಲದಿಂದಲೂ ಆಫ್ರಿಕ ಖನಿಜಗಳ ತವರೂರೆಂದು ಪ್ರಸಿದ್ಧವಾಗಿದ್ದರೂ 19 ನೆಯ ಶತಮಾನದಲ್ಲಿ ಖನಿಜೋತ್ಖನನ ಪ್ರಾರಂಭವಾಯಿತೆನ್ನಬಹುದು. ದಕ್ಷಿಣ ಆಫ್ರಿಕ, ರೊಡೀಷಿಯ ತಾಂಗನೀಕ, ಗೋಲ್ಡ್‍ಕೋಸ್ಟ್, ಬೆಲ್ಜಿಯಮ್ ಕಾಂಗೊ ಪ್ರದೇಶಗಳಲ್ಲಿ ಚಿನ್ನದ ಗಣಿಗಳಿವೆ. ಪ್ರಪಂಚದ ಉತ್ಪನ್ನದಲ್ಲಿ 5% ಚಿನ್ನ ಆಫ್ರಿಕದಿಂದ ಬರುತ್ತದೆ. 1870ರಲ್ಲಿ ದಕ್ಷಿಣ ಆಫ್ರಿಕದಲ್ಲಿ ವಜ್ರ ಪತ್ತೆಯಾದ ಮೇಲೆ ತಾಂಗನೀಕ, ಅಂಗೋಲ, ಬೆಲ್ಜಿಯಮ್, ಕಾಂಗೊ, ಬ್ರಿಟಿಷ್ ಪಶ್ಚಿಮ ಆಫ್ರಿಕಗಳಲ್ಲಿ ಆ ಅಮೂಲ್ಯ ಪದಾರ್ಥವನ್ನು ತೆಗೆಯಲಾಗುತ್ತಿದೆ. ಉತ್ತಮ ಮತ್ತು ವ್ಯಾಪಾರಿ ದರ್ಜೆಯ ವಜ್ರ ಇಲ್ಲಿ ಪ್ರಪಂಚದ 98% ಭಾಗ ಸಿಗುತ್ತಿದೆ. ಖಂಡದ ಬಹು ಮುಖ್ಯ ಕೈಗಾರಿಕಾ ಪ್ರದೇಶವೆಂದರೆ ದಕ್ಷಿಣ ಆಫ್ರಿಕ. ಕಲ್ಲಿದ್ದಲು, ಕಬ್ಬಿಣ ಮತ್ತು ಟಂಗ್‍ಸ್ಟನ್‍ಗಳು ದೊರೆಯುವುದರಿಂದ ಸಿಯಾರ ಲಿಯೋನ್ನಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳಿವೆ. 

	ಯುರೇನಿಯಂ, ವಜ್ರ, ತಾಮ್ರ, ಬಾಕ್ಸೈಟ್, ಮ್ಯಾಂಗನೀಸ್, ಕ್ರೋಮಿಯಂ ಇವು ಆಫ್ರಿಕದ ಅತಿ ಮುಖ್ಯ ಇತರ ಖನಿಜ ಸಂಪತ್ತುಗಳು. 

	ಶಕ್ತಿ ಉತ್ಪಾದಕ ಪದಾರ್ಥಗಳಾದ ಪೆಟ್ರೋಲಿಯಂ ಮತ್ತು ಕಲ್ಲಿದ್ದಲು ಈ ಖಂಡದಲ್ಲಿ ಅಲ್ಪ ಪ್ರಮಾಣದಲ್ಲಿ ದೊರೆಯುವುರಿಂದ ಅವುಗಳ ಕೊರತೆ ಹೆಚ್ಚು. ಪೆಟ್ರೋಲಿಯಂ ಅಲ್ಪ ಪ್ರಮಾಣದಲ್ಲಿ ಈಜಿಪ್ಟ್, ಆಲ್ಜೀರಿಯ, ಗಬನ್, ನೈಜೀರಿಯ ಅಂಗೋಲ ಮತ್ತು ಮೊರಾಕೊಗಳಲ್ಲಿ ದೊರೆಯುತ್ತವೆ. ಕಾಂಗೊ ಮತ್ತು ಉತ್ತರ ರೊಡೀಷಿಗಳು ಜಗತ್ತಿನಲ್ಲೇ ಹೆಚ್ಚಿನ ಪ್ರಮಾಣದಲ್ಲಿ ತಾಮ್ರವನ್ನು ಉತ್ಪಾದಿಸುವ ರಾಜ್ಯಗಳಾಗಿವೆ. ಕಾಂಗೊದ ಕಟಾಂಗ ಪ್ರದೇಶದಲ್ಲಿ ಅತ್ಯಂತ ಬೆಲೆ ಬಾಳುವ ತಾಮ್ರದ ಗಣಿಗಳಿವೆ. ತಾಮ್ರದ ಜೊತೆಗೆ ಇಲ್ಲಿ ಮ್ಯಾಂಗನೀಸ್, ಸತು, ಕಬ್ಬಿಣ, ತವರ, ಟಂಗ್‍ಸ್ಟನ್, ಪ್ಲಾಟಿನಂ, ಬೆಳ್ಳಿ, ಮತ್ತು ಬಿಸ್ಮತ್ ಲೋಹಗಳು ದೊರೆಯುತ್ತವೆ. ಮ್ಯಾಂಗನೀಸ್ ಅದಿರು ಹೆಚ್ಚಿನ ಪ್ರಮಾಣದಲ್ಲಿ ದಕ್ಷಿಣ ಆಫ್ರಿಕದ ಮೊರಾಕೊ, ಘಾನಗಳಲ್ಲಿ ದೊರೆಯುತ್ತದೆ. ಕಾಂಗೊ, ರೊಡೀಷಿಯಗಳಲ್ಲಿ ಕೊಬಾಲ್ಟ್ ಕೂಡ ದೊರೆಯುತ್ತದೆ. 

	ಬಾಕ್ಸೈಟ್ ಅದಿರಿಗೆ ಗಿನಿ ಮತ್ತು ಘಾನ ದೇಶಗಳು ಹೆಸರು ಪಡೆದಿವೆ. ಟ್ಯೂನೀಸಿಯ ಮತ್ತು ಮೊರಾಕೊ ಫಾಸ್ಫೇಟನ್ನು ಒದಗಿಸುವ ರಾಜ್ಯಗಳು. ಸೀಸ ಮತ್ತು ತವರ ಉತ್ತರ ರೊಡೀಷಿಯ ನೈಋತ್ಯ ಆಫ್ರಿಕ, ಮೊರಾಕೊ ಮತ್ತು ಕಾಂಗೊ ರಾಜ್ಯಗಳ ಮುಖ್ಯ ಖನಿಜಗಳು. 

ವ್ಯವಸಾಯ
ಆಫ್ರಿಕದ ಜನರ ಅತ್ಯಂತ ಮುಖ್ಯ ಉದ್ಯೋಗ ವ್ಯವಸಾಯ. ಸಾಕಷ್ಟು ಮಳೆ ಬೀಳುವ ಪ್ರದೇಶಗಳಲ್ಲಿ ವ್ಯವಸಾಯ ಅಲ್ಪ ಪ್ರಮಾಣದ ಮಳೆ ಬೀಳುವ ರಾಜ್ಯಗಳಲ್ಲಿ ದನಕರು ಮತ್ತು ಕುರಿಗಳನ್ನು ಸಾಕುವುದು ಇವರ ಮುಖ್ಯ ಜೀವನೋಪಾಯಗಳು. 

	ಸಂಪ್ರದಾಯಬದ್ಧವಾದ ವ್ಯವಸಾಯ ಉಷ್ಣವಲಯದ ಭಾಗದಲ್ಲಿ ಸಾಮಾನ್ಯವಾಗಿದೆ. ಇಲ್ಲಿಯ ಬೆಳೆಗಳು ಜೀವನಾಧಾರದವು. ವ್ಯವಸಾಯ ಪದ್ಧತಿಯೂ ವಿಚಿತ್ರವಾದುದು. ಹೊಲದ ಪಕ್ಕದಲ್ಲಿಯೇ ಹಳ್ಳಿ ಇರುತ್ತದೆ. ಮರ ಗಿಡಗಳನ್ನು ಸವರಿ ವ್ಯವಸಾಯಕ್ಕೆ ಅಳವಡಿಸಿಕೊಳ್ಳುತ್ತಾರೆ. ನೆಲಗಡಲೆ, ಗೆಣಸು, ಕೆಲವು ರೀತಿಯ ಕಾಳುಗಳು ಯಾಮ್ ಮತ್ತು ಕೆಸ್ಸವ ಎಂಬ ಗೆಣಸಿನ ಜಾತಿಯ ಗೆಡ್ಡೆಗಳು ಮುಂತಾದುವನ್ನು ಬೆಳೆಯುತ್ತಾರೆ. ನೀರಿನ ಸೌಲಭ್ಯವಿದ್ದಲ್ಲಿ ಜೋಳ ಮತ್ತು ಭತ್ತವನ್ನು ಸಹ ಬೆಳೆಯುತ್ತಾರೆ. ಈ ರೀತಿ ಇಲ್ಲಿ ಒಂದು ಅಥವಾ ಎರಡು ಬೆಳೆಗಳನ್ನು ತೆಗೆದು ಆ ಭೂಮಿ ನಿಸ್ಸತ್ತ್ವವಾದಾಗ ಅದನ್ನು ಬಿಟ್ಟು ಮತ್ತೊಂದು ಜಾಗಕ್ಕೆ ಹೋಗುವರು. ಇದು ಇಲ್ಲಿನ ವ್ಯವಸಾಯದ ವೈಶಿಷ್ಟ್ಯ. ಈ ಪ್ರದೇಶದ ಇತರ ಉತ್ಪನ್ನಗಳು - ತಾಳೆ (ಇದರಿಂದ ಎಣ್ಣೆ ಮತ್ತು ಕೊಬ್ಬರಿಯ ಹಾಗಿರುವ ತಿರುಳನ್ನು ತಯಾರಿಸಿ ಅನೇಕ ರೀತಿಯಲ್ಲಿ ಬಳಸುತ್ತಾರೆ), ಕೋಕೊ, ಕಾಫಿ, ಬಾಳೆ ಮತ್ತು ರಬ್ಬರ್. 

	ಪಶ್ಚಿಮ ಆಫ್ರಿಕ ತೀರಪ್ರದೇಶದಲ್ಲಿ ಗ್ಯಾಂಬಿಯದ ದಕ್ಷಿಣದ ಕಾಂಗೊ, ಸಿಯಾರ ಲಿಯೋನ್ ಮತ್ತು ನೈಜೀರಿಯಾಗಳಲ್ಲಿ ತಾಳೆಎಣ್ಣೆ ಮತ್ತು ತಾಳೆ ತಿರುಳು ಹೆಸರುವಾಸಿಯಾಗಿವೆ. ಗಿನಿ ತೀರಪ್ರದೇಶದಲ್ಲಿರುವ ಅನೇಕ ದ್ವೀಪಗಳು, ಘಾನ, ಪಶ್ಚಿಮ ನೈಜೀರಿಯಗಳು ಕೋಕೊ ಬೆಳೆಗೆ ಹೆಸರುಗಳಿಸಿವೆ. ಇಥಿಯೋಪಿಯ ಪ್ರಸಿದ್ಧ ಅರೇಬಿಕ ಕಾಫಿಗೆ ತವರುಮನೆ. ಕಾಫಿಯನ್ನು ಸಿಯಾರ, ಲಿಯೋನ್, ಲೈಬೀರಿಯ, ಕಾಂಗೊ, ಅಂಗೋಲ ಮತ್ತು ಪೂರ್ವದ ಬೆಟ್ಟದ ಸೀಮೆಯಲ್ಲಿ ಹೇರಳವಾಗಿ ಬೆಳೆಯುತ್ತಾರೆ. ಮಳೆ ಹೇರಳವಾಗಿ ಬೀಳುವ ಸಮಭಾಜಕವೃತ್ತ ಪ್ರದೇಶದಲ್ಲಿ ಉಷ್ಣವಲಯದ ಕೆಲವು ಭಾಗಗಳಲ್ಲಿ ಬಾಳೇಹಣ್ಣನ್ನು ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ. ಕಾಂಗೊ ಮತ್ತು ಪಶ್ಚಿಮ ಆಫ್ರಿಕದಲ್ಲಿ ರಬ್ಬರಿನ ಗಿಡಗಳು ಹೆಚ್ಚಾಗಿವೆ. 

	ನದೀ ಕೊಳ್ಳಗಳಲ್ಲಿ ಉತ್ತಮ ರೀತಿಯ ಸುಧಾರಿಸಿದ ವ್ಯವಸಾಯ ಪದ್ಧತಿ ರೂಢಿಯಲ್ಲಿದೆ. ಹತ್ತಿ, ಹೊಗೆಸೊಪ್ಪು, ಗೋಧಿ, ಬಾರ್ಲಿ ಮತ್ತು ಅನೇಕ ರೀತಿಯ ಧಾನ್ಯಗಳನ್ನು ನದಿಯ ಬಯಲುಗಳಲ್ಲಿ ಬೆಳೆಯುತ್ತಾರೆ. 

	ಆಫ್ರಿಕದ ಹತ್ತಿಯ ಬೆಳೆ ದಿನೇ ದಿನೇ ಅಭಿವೃದ್ಧಿ ಹೊಂದುತ್ತದೆ. ಸೂಡಾನ್ ಮತ್ತು ಈಜಿಪ್ಟ್ ದೇಶಗಳು ಹತ್ತಿಯನ್ನು ಹೇರಳವಾಗಿ ಬೆಳೆಯುತ್ತವೆ. ಶ್ಯಾಕಲ್ ಎಂಬ ಜಗತ್ ಪ್ರಸಿದ್ಧವಾದ ಹತ್ತಿಗೆ ಈಜಿಪ್ಟ್ ಹೆಸರಾದ ರಾಷ್ಟ್ರ. ಕಾಂಗೊ, ಉಗಾಂಡ ಮತ್ತು ಗಿನಿ ತೀರದ ರಾಷ್ಟ್ರಗಳಲ್ಲೂ ಹತ್ತಿಯನ್ನು ಬೆಳೆಯುತ್ತಾರೆ. 

	ಸನೆಗಾಲ್, ಗ್ಯಾಂಬಿಯ, ಉತ್ತರ ನೈಜೀರಿಯ ಮತ್ತು ಕಾಂಗೊ ರಾಷ್ಟ್ರಗಳ ಬೆಳೆಗಳಲ್ಲಿ ನೆಲಗಡಲೆಯೂ ಒಂದಾಗಿದೆ. ಈಜಿಪ್ಟ್ ಮತ್ತು ದಕ್ಷಿಣ ಆಫ್ರಿಕದಲ್ಲಿ ಜೋಳವನ್ನು ಮೇವಿಗಾಗಿಯೇ ಉಪಯೋಗಿಸುತ್ತಾರೆ. ಹೈವೆಲ್ಡ್ ಪ್ರದೇಶ ದಕ್ಷಿಣ ಆಫ್ರಿಕದಲ್ಲಿ ಜೋಳದ ಬೆಳೆಗೆ ಹೆಸರು ಪಡೆದಿದೆ. ಉಷ್ಣವಲಯದ ವಾಯುಗುಣವಿರುವ ಪ್ರದೇಶಗಳಲ್ಲಿ ಹೊಗೆಸೊಪ್ಪು ಅತಿ ಮುಖ್ಯ ಬೆಳೆ. ಸವನ್ನಾದ ನಾಡುಗಳಾದ ಸುಡಾನ್ ಕಾಂಗೊ ಮತ್ತು ಮಡಗಾಸ್ಕರ್, ರೋಡಿಷಿಯ ಮತ್ತು ದಕ್ಷಿಣ ಆಫ್ರಿಕಗಳಲ್ಲೂ ಹೊಗೆಸೊಪ್ಪನ್ನು ಬೆಳೆಯುತ್ತಾರೆ. 

	ಉತ್ತರ ಆಫ್ರಿಕದ ಆಲ್ಜೀರಿಯ, ಟ್ಯೂನಿಷಿಯ ಮತ್ತು ಮೊರಾಕೊ ರಾಜ್ಯಗಳು ಗೋದಿ ಮತ್ತು ಬಾರ್ಲಿ ಉತ್ಪಾದನೆಯಲ್ಲಿ ಪ್ರಥಮಸ್ಥಾನ ಪಡೆದಿವೆ. ಮೆಡಿಟರೇನಿಯನ್ ತೀರಪ್ರದೇಶದಲ್ಲಿ ಹಣ್ಣಿನ ತೋಟಗಳು ಬಹುಸಂಖ್ಯೆಯಲ್ಲಿವೆ. ದ್ರಾಕ್ಷಿ ಮುಂತಾದ ಹಣ್ಣುಗಳನ್ನು ಇಲ್ಲಿ ಬೆಳೆಯುತ್ತಾರೆ. ಆಲೀನ್ ಮತ್ತು ದ್ರಾಕ್ಷಿ ತೋಟಗಳಿಗೆ ಈ ಪ್ರದೇಶ ಹೆಸರು ಪಡೆದಿದೆ. ಮೆಡಿಟರೀನಿಯನ್ ಹಣ್ಣುಗಳನ್ನು ಕೇಪ್ ಪ್ರಾಂತ್ಯ, ಟ್ರಾನ್ಸ್‍ವಾಲ್, ನೇಟಾಲ್ ಮತ್ತು ದಕ್ಷಿಣ ರೊಡೀಷಿಯದಲ್ಲೂ ಬೆಳೆಯುವರು. 

	ದನಕರು ಮತ್ತು ಕುರಿ ಸಾಕುವುದು ಆಫ್ರಿಕದಲ್ಲಿ ಬಹಳ ಹಿಂದಿನಿಂದಲೂ ರೂಢಿಯಲ್ಲಿದೆ. ಗಿನಿ ತೀರ, ಸೂಡಾನ್, ಪೂರ್ವ ರಾಜ್ಯಗಳು ಮತ್ತು ದಕ್ಷಿಣ ಆಫ್ರಿಕದ ರಾಜ್ಯಗಳು ದನಕರುಗಳು ಮತ್ತು ಕುರಿ ಸಾಕಣೆಗೆ ಪ್ರಸಿದ್ಧವಾಗಿವೆ. ಬರ್‍ಬರಿ ರಾಜ್ಯಗಳು (ಮೆಡಿಟರೇನಿಯನ್) ಮತ್ತು ಪೂರ್ವ, ದಕ್ಷಿಣ ಆಫ್ರಿಕದ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುರಿಗಳನ್ನು ಸಾಕುತ್ತಾರೆ. ದಕ್ಷಿಣ ಆಫ್ರಿಕದಲ್ಲಿ ಎಣ್ಣೆ ಅತಿ ಮುಖ್ಯವಾದ ರಫ್ತಿನ ವಸ್ತುಗಳಲ್ಲೊಂದು. ರೊಡೀಷಿಯ, ಅಂಗೋಲಗಳಲ್ಲಿ ಸಹ ಕುರಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. 

ಕೈಗಾರಿಕೆಗಳು
ದೊಡ್ಡ ಪ್ರಮಾಣದ, ಬೃಹತ್ ಕೈಗಾರಿಕೆಗಳು, ಆಫ್ರಿಕದ ಯಾವ ರಾಜ್ಯದಲ್ಲೂ ಇಲ್ಲವೆಂದು ಹೇಳಬಹುದು. ಆದುದರಿಂದ ಅಲ್ಲಿ ಕೈಗಾರಿಕೆ ಇನ್ನೂ ಶೈಶವಾವಸ್ಥೆಯಲ್ಲಿಯೇ ಇದೆ. ಈಗ ಇರುವ ಕೆಲವೇ ಕೈಗಾರಿಕೆಗಳು ಹೆಚ್ಚಾಗಿ ವ್ಯವಸಾಯ ಅಥವಾ ಖನಿಜಗಳ ಉತ್ಪಾದನೆಗೆ ಸಂಬಂಧಿಸಿದುವು. ರಫ್ತು ಮಾಡುವ ಕಚ್ಚಾಪದಾರ್ಥಗಳನ್ನು ಸಿದ್ಧಪಡಿಸುವ ಅನೇಕ ಕೈಗಾರಿಕೆಗಳು ಇಲ್ಲಿವೆ. ಕೈಗಾರಿಕೆಯ ಪ್ರಗತಿ ದ್ವಿತೀಯ ಯುದ್ಧಾನಂತರ ಹೆಚ್ಚಾಗಿ ನಡೆದಿದೆ ಎಂದು ಹೇಳಬಹುದು. 

	ಬೃಹತ್ ಕೈಗಾರಿಕೆಗಳು ಅಲ್ಲೊಂದು ಇಲ್ಲೊಂದು ಇತ್ತೀಚೆಗೆ ಸ್ಥಾಪಿಸಲ್ಪಟ್ಟಿವೆ. ಭಾರಿ ಪ್ರಮಾಣದ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯನ್ನು ದಕ್ಷಿಣ ಆಫ್ರಿಕದ ಗಣರಾಜ್ಯದಲ್ಲಿ ಸ್ಥಾಪಿಸಿದ್ದಾರೆ. ಇಲ್ಲಿ ರಫ್ತು ಪದಾರ್ಥಗಳನ್ನು ಅಣಿಗೊಳಿಸುವ ಮತ್ತು ಆಹಾರ ಪದಾರ್ಥಗಳನ್ನು ಸಿದ್ಧಗೊಳಿಸುವ ಅನೇಕ ಕಾರ್ಖಾನೆಗಳಿವೆ. 

	ಇಲ್ಲಿಯ ಕೈಗಾರಿಕೆಯಲ್ಲಿ ಚರ್ಮವನ್ನು ಹದ ಮಾಡುವುದು, ಮರದ ದಿಮ್ಮಿಗಳನ್ನು ಸಿದ್ಧಪಡಿಸುವುದು, ಹತ್ತಿ ಬಟ್ಟೆ ಕೈಗಾರಿಕೆ, ತಾಮ್ರವನ್ನು ಕರಗಿಸುವುದು ಮತ್ತು ಯಂತ್ರೋಪಕರಣಗಳನ್ನು ತಯಾರಿಸುವುದು ಮುಖ್ಯವಾಗಿವೆ. ಈ ಕೈಗಾರಿಕೆಗಳು, ಕೆನ್ಯ, ರೊಡೀಷಿಯ ಈಜಿಪ್ಟ್, ಕಾಂಗೊ ಮತ್ತು ಪಶ್ಚಿಮ ಆಫ್ರಿಕದಲ್ಲಿ ಹೆಚ್ಚಾಗಿವೆ. ತಾಮ್ರವನ್ನು ಕರಗಿಸುವ ಕೈಗಾರಿಕೆ ಕಾಂಗೊದಲ್ಲೂ, ಹತ್ತಿಬಟ್ಟೆಯ ಉದ್ಯಮ ಸೂಡಾನ್ ಮತ್ತು ಈಜಿಪ್ಟ್‍ಗಳಲ್ಲೂ ತಾಳೆಕಾಯಿಯಿಂದ ಎಣ್ಣೆಯನ್ನು ತೆಗೆಯುವ ಕೈಗಾರಿಕೆ ನೈಜೀರಿಯದಲ್ಲಿಯೂ ಹೆಚ್ಚಾಗಿ ಬೆಳೆದಿವೆ. 

	ಇತ್ತೀಚೆಗೆ ಕೈಗಾರಿಕಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾದ ಬದಲಾವಣೆಗಳಾಗಿವೆ. ಉತ್ತರ ಆಫ್ರಿಕ ಮತ್ತು ಲಿಬಿಯಗಳಲ್ಲಿ ಪೆಟ್ರೋಲಿಯಂ ಉದ್ಯಮ ತೀವ್ರಗತಿಯಲ್ಲಿ ಸಾಗಿದೆ. ಈಜಿಪ್ಟ್, ಉಗಾಂಡ ಮತ್ತು ರೋಡಿಷಿಯಗಳಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ. ಈಜಿಪ್ಟ್‍ನಲ್ಲಿ ಕಬ್ಬಿಣ, ಉಕ್ಕಿನ ಕೈಗಾರಿಕೆ ಮತ್ತು ಕಾರು ಮುಂತಾದ ವಾಹನಗಳನ್ನು ಜೋಡಿಸುವ ಕೈಗಾರಿಕೆಗಳು ಸ್ಥಾಪಿಸಲ್ಪಟ್ಟಿವೆ. ಉಗಾಂಡದಲ್ಲಿ ಸಕ್ಕರೆಯ ಕಾರ್ಖಾನೆಗಳು ಸ್ಥಾಪಿತವಾಗಿವೆ. ದಕ್ಷಿಣ ಆಫ್ರಿಕದ ರಾಜ್ಯಗಳಲ್ಲಿ ಉಣ್ಣೆ ಬಟ್ಟೆ, ಸಿಮೆಂಟ್, ಸೋಪು, ರಬ್ಬರ್ ಟೈರುಗಳು, ಬೆಣ್ಣೆ ಮತ್ತು ಗಿಣ್ಣುಗಳನ್ನು ತಯಾರಿಸುವುದು ಮುಖ್ಯ ಕೈಗಾರಿಕೆಗಳು. 

ಸಂಚಾರ ವ್ಯವಸ್ಥೆ
ಆಫ್ರಿಕದಲ್ಲಿನ ಸಂಚಾರ ಸಂಪರ್ಕವನ್ನು ಬೇರೆ ಖಂಡಗಳೊಡನೆ ಹೋಲಿಸಿದರೆ ಖಂಡ ಇನ್ನೂ ಬಹಳ ಹಿಂದುಳಿದಿದೆ ಎಂದು ಹೇಳಬೇಕು. ಇಲ್ಲಿ ಸುಮಾರು 45,000 ಮೈಲಿ ಉದ್ದದ ರೈಲು ಮಾರ್ಗವಿದೆ. ಇದರಲ್ಲಿ ಹೆಚ್ಚಿನ ಭಾಗ ದಕ್ಷಿಣ ಯೂನಿಯನ್ ಆಫ್ ಸೌತ್ ಆಫ್ರಿಕ ಮತ್ತು ಮೆಡಿಟರೇನಿಯನ್ ರಾಜ್ಯಗಳಲ್ಲಿ ಕಂಡುಬರುತ್ತದೆ. ಸಾಧಾರಣ ರಸ್ತೆ ಸಂಪರ್ಕವೂ ಬಹಳ ಕಡಿಮೆ. ಹೆಚ್ಚು ದೂರವಿರುವ ಪ್ರಮುಖ ಪಟ್ಟಣಗಳ ಮಧ್ಯೆ ವಾಯುಮಾರ್ಗ ಸಂಪರ್ಕಗಳಿವೆ. ಮಧ್ಯ ಆಫ್ರಿಕದ ಕೆಲವು ಕಡೆಗಳಲ್ಲೂ ಮರುಭೂಮಿ ವಲಯಗಳಲ್ಲೂ ಸಂಪರ್ಕ ಸಾಧನಗಳ ಕೊರತೆ ಇದೆ. ಸಹರದಲ್ಲೂ ಮಧ್ಯ ಆಫ್ರಿಕದಲ್ಲೂ ವಸ್ತು ಸಾಗಾಟಕ್ಕೆ ಒಂಟೆಗಳನ್ನು ಉಪಯೋಗಿಸುತ್ತಾರೆ. ಅನೇಕ ಕಡೆಗಳಲ್ಲಿ ದೋಣಿ ಮುಖ್ಯ ಸಾಗಾಣಿಕೆಯ ಸಾಧನವಾಗಿದೆ. ನೈಲ್ ಮತ್ತು ಕಾಂಗೊ ಮುಂತಾದ ನದಿಗಳಲ್ಲಿ ಕೆಲವು ಕಡೆ ದೋಣಿಯ ಸಂಚಾರಕ್ಕೆ ಅನುಕೂಲತೆಯಿದೆ. 

ಆಫ್ರಿಕದ ನಾಗರಿಕತೆ
ಇಪ್ಪತ್ತನೆಯ ಶತಮಾನದ ಆರ್ಥಿಕಾಭಿವೃದ್ಧಿ, ಎರಡು ಮಹಾಯುದ್ಧಗಳ ಪರಿಣಾಮ, ಮತ್ತು ಮಹತ್ತರ ರಾಜಕೀಯ ಬದಲಾವಣೆಗಳಿಂದ ಆಫ್ರಿಕದ ನಾಗರಿಕತೆ ಬದಲಾಗಿದೆ. ಅನೇಕ ಮಹಾನಗರಗಳು ಆಧುನಿಕ ರೀತಿಯಲ್ಲಿ ಬೆಳೆಯುತ್ತಿವೆ. ಗ್ರಾಮಾಂತರ ಪ್ರದೇಶವನ್ನು ಕಡೆಗಣಿಸಿ ಅನೇಕ ಹಳ್ಳಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣದ ಕಡೆಗೆ ಧಾವಿಸುತ್ತಿದ್ದಾರೆ. ಈ ಖಂಡದಲ್ಲಿ ಈಚೆಗೆ ರಾಷ್ಟ್ರೀಯ ಮನೋಭಾವ ಎಲ್ಲೆಡೆಗಳಲ್ಲೂ ಉಕ್ಕೇರುತ್ತಿದೆ. ಪರಿಣಾಮವಾಗಿ ಅನೇಕ ರಾಜ್ಯಗಳು ಸ್ವಯಮಾಧಿಕಾರ ಪಡೆದಿವೆ. ಇನ್ನೂ ಸ್ವತಂತ್ರವಾಗದೆ ಉಳಿದ ಕೆಲವು ರಾಷ್ಟ್ರಗಳಲ್ಲಿ ಅಲ್ಪ ಸಂಖ್ಯಾತರಾದ ಬಿಳಿಯರ ಆಡಳಿತದ ದಮನಕ್ಕೆ ಅನೇಕ ಚಳವಳಿಗಳು ನಡೆಯುತ್ತಿವೆ. 

	ಖಂಡದ ನಾಗರಿಕತೆಯಲ್ಲಿ ಮಹತ್ತರ ಏರುಪೇರುಗಳನ್ನು ಗುರುತಿಸಬಹುದು. ಈಜಿಪ್ಟ್ ಭವ್ಯ ಸಂಸ್ಕøತಿಗೆ ಹೆಸರಾಗಿದ್ದು, ನವನಾಗರಿಕತೆಯಲ್ಲೂ ಹಿಂದುಳಿದಿಲ್ಲ. ಆದರೆ ಪೂರ್ವ ಆಫ್ರಿಕದ ಕೆಲವು ರಾಷ್ಟ್ರಗಳಲ್ಲಿ ಏನೂ ಬದಲಾವಣೆಗಳಾಗಿಲ್ಲ. ಬಡತನ, ಅನಾರೋಗ್ಯ, ಅನಕ್ಷರತೆ, ಎಲ್ಲೆಡೆಗಳಲ್ಲೂ ಮನೆಮಾಡಿಕೊಂಡಿವೆ. ಮಂತ್ರ, ಮಾಟ, ಬಹುಪತ್ನೀ ವಿವಾಹ ಮುಂತಾದ ಪದ್ಧತಿಗಳು ಇಂದಿಗೂ ಬಳಕೆಯಲ್ಲಿವೆ. 

	ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕøತಿಯ ಪರಿಣಾಮವಾಗಿ ಆದ ಮಹತ್ತರ ಬದಲಾವಣೆಗಳು ಇಲ್ಲೂ ಕಂಡು ಬರುತ್ತಿವೆ. ಆಫ್ರಿಕ, ಅನೇಕ ಅಪೂರ್ವ ಅವಶ್ಯ ವಸ್ತುಗಳ ಕಚ್ಚಾಪದಾರ್ಥಗಳ ಕೋಠಿಯಾಗಿದೆ. ಅನೇಕ ಪಾಶ್ಚಾತ್ಯರು ಅತ್ಯಾವಶ್ಯಕ ವಸ್ತುಗಳನ್ನು ಆಫ್ರಿಕದಿಂದ ಪಡೆಯುತ್ತಾರೆ. ಆದ್ದರಿಂದ ಪಾಶ್ಚಾತ್ಯರು ಈ ಹಿಂದುಳಿದ ಜನಾಂಗ ಮತ್ತು ರಾಷ್ಟ್ರಗಳಿಗೆ ಸಹಾಯ ಮಾಡಲು ತವಕಿಸುತ್ತಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಗಣನೀಯವಾದ ಬದಲಾವಣೆಗಳಾಗಿವೆ.			
(ಎಸ್.ಎಲ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ